Sunday, February 16, 2025

ಏರಲೇ ಬೇಕು ಉಗಿಬಂಡಿ

ಜಾರುತಿದೆ ಹಳಿಯಿಂದ ನಮ್ಮ ಬೆಂಗಳೂರು

ಏರುತಿಹ ದರದಿಂದ ಕಾಪಿಡುವವರಾರು?

ಬೆಳೆಬೆಳೆದು ತನ್ನೆ ತಾ ತಿಂದು ಮುಗಿಸುವ ಮುನ್ನ

ಪುರವ ಕಾಯುವ ದೊರೆಗಳು ಎದ್ದುಕೂತರೆ ಚೆನ್ನ


ನೆರಳೆ-ಹಸಿರು ಸುಂದರಿಯರಿಗಾಗಿ ತಿಂದೆವೆಲ್ಲ ಮಣ್ಣು-ಧೂಳು

ತೆವಳುವ ಟ್ರಾಫಿಕ್ಕಿನಲ್ಲೇ ಸವೆಸಿದೆವಲ್ಲ ದಶಕದ ಬಾಳು

ಈಗ ಉಸ್ಸೆಂದು ಕೂತು ಮುಂದಿನ ನಿಲ್ದಾಣಕ್ಕೆ ಹೊರಡುವ ಮುನ್ನ

ಬೆವರಿದ ಜೇಬಿಗೆ ಹೊಡೆದಿರಲ್ಲ ದರ ಏರಿಕೆಯ ಗುನ್ನಾ


ಹಳದಿ ನೀಲಿ ಕಿತ್ತಳೆ; ವಿಸ್ತರಿಸಿದಿರಿ ದಾರಿಗೊಂದು ಬಣ್ಣ

ಕಾಲು ಚಾಚುವ ಮುನ್ನ ಹಾಸಿಗೆ ನೋಡಬೇಕಲ್ಲಣ್ಣ ?

ಯಾಕೆ ಬೇಕಿತ್ತು ಸ್ವಯಂಚಾಲಿತ ರೈಲು? ಬಿಟ್ಟು ಹೊರಟಿಲ್ಲ ಚೈನಾ

ಹೊಸ ಸೀರೆಗೆಂದು ಹಳೆಸೀರೆ ಸುಟ್ಟಂತೆ ನಮದೀಗ ನಾವಿಕನಿರದ ಪಯಣ


ಇಲ್ಲಿಯವರ ಬಳಿಯಿಲ್ಲ ಖಜಾನೆ, ಅಲ್ಲಿಯವರಿಗಿಲ್ಲ ಕೇಳುವ ಸಹನೆ

ಪರಿಹಾರದ ಮಾತಿಲ್ಲ; ಇಬ್ಬರದೂ ಬರೀ ಬಾಯಿಬಡುಕ ರಾಜಕಾರಣ

ಇಂದು ಅದ್ಯಾರ ಫರ್ಮಾನೋ ; ನಾಳೆ ಅದ್ಯಾರ ತಲೆದಂಡವೋ

ಶ್ರೀ ಸಾಮಾನ್ಯನ ಬದುಕಲ್ಲಂತೂ ನಿತ್ಯ ಸ್ವಪ್ನದಹನ


ಆದರೂ ಏರಲೇ ಬೇಕು ಉಗಿಬಂಡಿ; ಕಾರಣ? ಸಮಯ ಉಳಿಯುತ್ತದೆ

ಎಪ್ಪತ್ತು ಗಂಟೆ ದುಡಿದು ಸುಸ್ತಾಗಿರುವಾಗ ದೇಹ, ನಿದ್ದೆ-ಊಟ ಬೇಡುತ್ತದೆ

ಬಿನ್ನಹವಿಷ್ಟೇ ದೊರೆ!, "ಸುಂಕ ಏರಿಸಲೇಬೇಡಿ" ಎನ್ನುತ್ತಿಲ್ಲ ಖಂಡಿತ

ಲೆಕ್ಕದ ಪಟ್ಟಿ ಹಿಡಿದು ಕೂತಾಗ, ದಪ್ಪ ಅಕ್ಷರದಲಿ ಕಾಣಲಿ "ಜನಹಿತ"


-ಚಿನ್ಮಯ

೧೬/೨/೨೦೨೫

Saturday, October 14, 2023

ಆಫೀಸಿನಿಂದ ಬರುವಾಗ

ಆಫೀಸಿನಿಂದ ಬರುವಾಗ ಪ್ರತೀಸಲ ಯುವತಿಯೊಬ್ಬಳು ಸಿಗುತ್ತಾಳೆ

ಮೀಟಿಂಗಿನಲ್ಲಿ ಬೈದಿದ್ದರೂ, ಹೊಗಳಿದ್ದರೂ, ಸಪ್ಪೆಯಾಗಿದ್ದರೂ ಈಕೆ ಮುಗುಳ್ನಗುತ್ತಾಳೆ

ಸುಯ್ಯೆಂದು ಸಾಗುತ್ತದೆ ಕ್ಯಾಬು, ಈಕೆ ಮಾತ್ರ ಕಣ್ಣ್ ಮುಚ್ಚುವುದಿಲ್ಲ

ಧೂಳು, ಮಳೆ, ಗಾಳಿ ಏನೇ ಬಂದರೂ ಆಕೆ ನಿಂತಲ್ಲಿಂದ ಕದಲುವುದಿಲ್ಲ

 

ಬಾಲ್ಯದಲ್ಲಾಗಿದ್ದರೆ ಆಕೆಯ ಬಳಿ ಹೋಗಿ ಗಡ್ಡ-ಮೀಸೆ ಬಿಡಿಸುತ್ತಿದ್ದೆ

ಚಂದದ ಹಲ್ಲುಗಳ ವಿಕಾರವಾಗಿಸಿ, ಕಣ್ಣು ಕುರುಡಾಗಿಸುತ್ತಿದ್ದೆ

ಕೇಸು ಬೀಳಬಹುದೇನೋ ಈಗ, ಹಾಗೆಲ್ಲ ಮಾಡುವುದು ತರವಲ್ಲ

ರಸ್ತೆ ಬದಿ ಫಲಕದಲ್ಲಿ ಕಾಗುಣಿತ ತಪ್ಪಿದ್ದರೂ ಈಗ ಹಿಡಿಸುವುದಿಲ್ಲ

 

ಮುಂದಿನ ಸೀಟಿನ ಮಹಿಳೆಯರು ಸೀರೆ-ಸರದ ಬಗ್ಗೆ ಮಾತಾಡುತ್ತಿಲ್ಲ

ಬರುಬರುತ್ತಾ ಆಕೆ ತೊಟ್ಟ ಆಭರಣ ಮಸುಕೆನಿಸಿದೆ, ಲಕ-ಲಕ ಹೊಳೆಯುತ್ತಿಲ್ಲ

ಅಕ್ಷಯ ತದಿಗೆ ಮುಗಿದ ಮೇಲೆ ಬೇರೇನೋ ಬರಬಹುದು; ಆಕೆಗಿದು ಗೊತ್ತೇ?

ಮತ್ತೇನೋ ರಿಯಾಯತಿಯ ಮೆಸ್ಸೇಜು ಹೊತ್ತು; ಆಕೆಯೇ ಬರಬಹುದೇ ಮತ್ತೆ!

 

ಟ್ರಾಫಿಕ್ಕು ಜಾಮಾಗಿ ನಿಂತಲ್ಲೇ ನಿಂತಾಗ; ಆಕೆಯೊಟ್ಟಿಗೆ ಮಾತನಾಡಿದ್ದೆ

ಆಕೆಯನ್ನೇ ಪಾತ್ರವಾಗಿಸಿ ಆಫೀಸಿನಲ್ಲಿ ಯಾರನ್ನೋ ಅಣುಕಿಸಿದ್ದೆ

ಇಂದು ಸಂಜೆ ಇದ್ದಕ್ಕಿದ್ದಂತೆ ಆಕೆ ಕಾಣಿಸುತ್ತಿಲ್ಲ; ಬರೀ ಸ್ಟೀಲ್ ರಾಡಿನ ಅಸ್ತಿಪಂಜರ

ಇದೀಗ ಜೇಬು ಖಾಲಿಮಾಡಿಸಲು ಅವಕಾಶವಿರುವ ಆಸೆಗಳ ಶರಪಂಜರ

 

ಕಾಯುತ್ತಿದ್ದೇನೆ ಇದೀಗ ಅಲ್ಲಿ ಮತ್ತೇನು ಅವತಾರ ಬರಬಹುದೆಂದು

ನಿರ್ಧಾರ ಮಾಡಿದ್ದೇನೆ ಯಾರೇ ಬಂದರೂ ಆಕೆಯ ಮಾತ್ರ ಮರೆಯಬಾರದೆಂದು!

 

-ಚಿನ್ಮಯ

೧೪/೧೦/೨೦೨೩

Friday, November 11, 2022

ಪಾರಿವಾಳ

ತಣ್ಣಗಿದ್ದ ಬೀದಿಯಲ್ಲಿ ಗುಮೀಟು ಬಿದ್ದಂತೆ ದುಢುಂ ಸದ್ದು

ದಿವ್ಯಧ್ಯಾನದಲ್ಲಿ ಕೂತಿದ್ದ ಪಾರಿವಾಳದ ಹಿಂಡು ಥಟ್ಟನೆ ದಂಡೆದ್ದಿತು

ಪಟಪಟ ರೆಕ್ಕೆ ಬಡಿತ, ಪ್ರದಕ್ಷಿಣಾಕಾರ ಒಂದು ದೊಡ್ಡ ಸುತ್ತು

ಸಾವರಿಸಿ ವಾಪಸಾದಾಗ ಕೂತ ಜಾಗ ಬೇರೆಯವರ ಪಾಲಾಗಿತ್ತು

 

ಜಾಗವೇನೂ ಸ್ವಂತದ್ದಲ್ಲ, ಕಾರ್ಪೊರೇಷನ್ ಸಬ್ಸಿಡಿಯ ಸೋಲಾರ್ ಪ್ಯಾನೆಲ್ಲು

ಮೊದಲಿದ್ದವರ್ಯಾರೋ ಪಿಷ್ಟಿ ಹಾಕಿ ಬಿಟ್ಟುಹೋದ ಸಿಲಿಕಾನ್ ಜಾರುಗಲ್ಲು

ಪಕ್ಕದ ಬೀದಿಯ ಕಿರಾಣಿ ಅಂಗಡಿಯೇ ದಿನಕ್ಕೂ ಇವಕ್ಕೆ ರೇಷನ್ನು ದಾತ

ಚಂದ ಸಿಂಗರಿಸಿದ ಬಾಲ್ಕನಿಯಲಿ ಗೂಡುಕಟ್ಟುವುದು ಇವುಗಳ ಚಿರ ಇಂಗಿತ

 

ಕಡ್ಡಿ ಹುಲ್ಲು ಗರಿಕೆ ಇಂತಹುದೇ ಬೇಕೆಂದಿಲ್ಲ, ಜಂಗು ತಂತಿ ರಟ್ಟುಗಳೂ ಆದೀತು

ಚದರಡಿ ಲೆಕ್ಕದಲ್ಲೆಲ್ಲ ಗೂಡು ಬೇಕಿಲ್ಲ, ಒಂದುವರೆ ಕಾಲು ಊರುವಷ್ಟೇ ಸಂದೀತು

ಶಹರದ ಅಂಗವಾಗಿವೆ ಇವೀಗ, ಬ್ರಿಟೀಶ್ ಕಾಲದ ಗೋಡೆಗಳಿಗೆ ನೈಸರ್ಗಿಕ ಚಿತ್ತಾರ

ನಾಕುದಿನ ಬೀಗ ತೆಗೆಯದ ಆಫೀಸು ಸ್ಟೋರ್ ರೂಮಿನಲ್ಲೆಲ್ಲ ಸಾಂದರ್ಭಿಕ ಸಂಸಾರ

 

ನಿತ್ಯ ಕೋಲಾಹಲ ಗದ್ದಲ ಹೆದರುವುದಿಲ್ಲ ಇವು; ಶತಮಾನಗಳಿಂದಲೂ ಶಾಂತಿದೂತ

ಬಹುಶ ಬಹಳ ಹಿಂದೇ ಎಲ್ಲರಿಗಿಂತ ಮೊದಲು ಕೆಲಸವರಸಿ ವಲಸೆ ಬಂದ ಸಂದೇಶದಾತ

ಕತ್ತು ಅಲ್ಲಾಡಿಸಿ ಮುಂದೆ ಸಾಗಿ ಎಂಬುದೇ ಸಂದೇಶವೇನೋ ಹಳಿವ ನವ ಶಹರವಾಸಿಗಳಿಗೆ

ಎಸೆದ ಕಸದಿಂದ ಗೂಡುಕಟ್ಟುವ ಕುಸುರಿ, ಒಂಟಿಕಾಲ ಯೋಗಕ್ಕೆ ಸಿಗಲೇಬೇಕಿದೆ ಮೆಚ್ಚುಗೆ

 

ಪರರ ಮೆಚ್ಚಲಿಸಲಿಕ್ಕಲ್ಲ, ಸ್ವಂತದ ರಿಯಾಜಿಗಲ್ಲ; ದಿನಕ್ಕೊಂದಿಷ್ಟು ಸಹಜ ಹೂಂಕರಿಕೆ

ಹೇಗೂ ತೂರಿ, ಅಡುಗೆಮನೆ ಸೇರಿ ಯಜಮಾನತಿ ಕಂಡೊಡನೆ ಹೊರಡುವ ಪಟಪಟಿಕೆ

ಇವುಗಳ ದೆಸೆಯಿಂದ ದೇವ ಗೋಪುರ, ಓಪನ್ ಕೆನೊಪಿಗಳಿಗೂ ಹಸಿರು ಜಾಳಿಗೆ

ಒತ್ತುವರಿಯೆಂದು ಒಕ್ಕಲೆಬ್ಬಿಸಲೂ ಬಹುದು, ಖಾತರಿಯೇನಿಲ್ಲ ಯಾವುದಕ್ಕೂ ಇಲ್ಲಿ ನಾಳೆಗೆ

 

ನಗರ ಮತ್ತು ಪಾರಿವಾಳ ಸೂರ್ಯ-ಚಂದ್ರರಂತೇ ಜೋಡಿಯಾಗಿ ಹೋಗಿವೆ

ಕಮಟು ವಾಸನೆಯೇ ಪಾರಂಪರಿಕತೆಯ ಪರಿಮಳವೆನಿಸುವಷ್ಟು ನಂಬಿಸಿಬಿಟ್ಟಿವೆ

 

-ಚಿನ್ಮಯ

11/11/2022

Sunday, July 5, 2020

ಬೆಂಗಳೂರಿಗೆ ಬೈದರೆ ಬದುಕು ಬದಲಾಗುವುದಿಲ್ಲ
ಊರು, ವರುಷಗಳ ಹಿಂದಿದ್ದಂತೇ ಈಗ ಇರುವುದಿಲ್ಲ

ಸರ್ಟಿಫಿಕೇಟು ಹಿಡಿದು ಬಂದಿದ್ದೆವಲ್ಲ ಇಂಟರ್‍ವ್ಯೂ ಆಸೆಯಲ್ಲಿ
ಬೆರಗಾದೆವಲ್ಲ ಜನಜಂಗುಳಿ ನೋಡಿ ರೇಲ್ವೇ ಸ್ಟೇಷನ್ನಿನಲ್ಲಿ
ಬಟ್ಟೆ-ಬರೆ ಸಾಲವಿದ್ದ ಹರಕು ಬ್ಯಾಗಿನಲ್ಲಿ ಕಾಸು ತುಂಬಬೇಕಿತ್ತು
ಪುಟ್ಟ ಆಸೆಗಳನೂ ಸುಟ್ಟು ಗೊಬ್ಬರವಾಗಿಸಿ ಬೆಳೆಸಿದವರ ಮುಖ ಅರಳಿಸಬೇಕಿತ್ತು

ಯಾರೋ ಪರಿಚಯವಾದವರು ಕೊಡಿಸಿದ ಪುಟ್ಟ ಬಾಡಿಗೆ ರೂಮು
ದಿನಕ್ಕೆ ಮೂರು ಶಿಫ್ಟು-ರೊಟೇಷನ್ನು; ತಿಂಗಳು ಪೂರ್ತಿ ನಿದ್ದೆ ಜೋಮು
ಮೊದಲ ಸಂಬಳ ಸಿಕ್ಕಾಗ ಊರು ಬಿಟ್ಟಿದ್ದು ತೀರಾ ಸರಿಯೆನಿಸಿತ್ತು
ಹೊಸ ಬೈಕು ಖರೀದಿಸಿದ ಮೇಲೆ ಗಲ್ಲಿ ಗಲ್ಲಿ ಸುತ್ತುವುದೂ ಶಕ್ಯವಿತ್ತು

ಹಬ್ಬಕ್ಕೆಂದು ಊರಿಗೆ ಹೋದಾಗ; ಹತ್ತಿರದವರಿಗೆಲ್ಲ ಬಗೆ ಬಗೆ ಉಡುಗೊರೆ
ಕಂಪನಿ ಕೆಲಸದವನೆಂದು ಉದ್ದರಿ ಶೇಟನಿಂದಲೂ ವಿಶೇಷ ಅಕ್ಕರೆ
ಹಾಕಿದ ರಜೆ ಮುಗಿದು ಬೆಂಗಳೂರು ಬಸ್ಸು ಹತ್ತುವಾಗ ಅತೀವ ವೇದನೆ
ದುಡಿದುಡಿದು ಸುಸ್ತಾಗಿ ಹಾಸಿಗೆ ಹಿಡಿದಾಗ ಊರಮದ್ದಿನದೇ ಆಲೋಚನೆ

ಸಾಕಾಯ್ತು ಇರಲಾರೆ ಎನ್ನುತ್ತಲೇ ಸಾಕಷ್ಟು ಕಾಲ ಎಲ್ಲ ಉಳಿದಿದ್ದಾರೆ
ಹೊರಟೇಬಿಟ್ಟೆ ಎನ್ನುತ್ತಲೇ ಅದೊಂದು ಇದೊಂದು ತೊಡಗಿಸಿಕೊಂಡಿದ್ದಾರೆ
ಕಾರಿನ ಈ.ಎಂ.ಐ ಮುಗಿವವರೆಗೆ; ಮಕ್ಕಳು ಪಿ.ಯೂ.ಸಿ ಪಾಸಾಗುವವರೆಗೆ
ಸ್ವಂತ ಕಂಪನಿ ಗಟ್ಟಿಯಾಗುವವರೆಗೆ; ಅವರವರ ಪ್ಲಾನು ಅವರವರಿಗೆ

ಕಲಿತ ವಿದ್ಯೆಗೆ, ಕರಗತವಾಗಿಸಿಕೊಂಡ ನೈಪುಣ್ಯಕ್ಕೆ ಇಲ್ಲಿ ಅವಕಾಶ ದಕ್ಕಿದೆ
ಷೆಡ್ಯುಲು ಪ್ರಕಾರ ಎಂಟೂವರೆ ಗಂಟೆ ದುಡಿತಕ್ಕೆ ಪಿ.ಎಫು ಶೇಖರಣೆಯಾಗಿದೆ
ವೇಗ ಸಾಕಾಗದೆಂದು ಮ್ಯಾನೇಜರು ಓಡಿಸಿದರೂ; ಕಂಪನಿ ಕ್ವಾಟರ್ಲೀ ಗ್ಲೂಕೋಸು ಕೊಟ್ಟಿದೆ
ಈ ಕಂಪನಿ ಬೋರಾದರೆ ಬೇರೆಡೆ ಹಾರುವುದಕ್ಕೆ ರೆಕ್ಕೆ-ಪುಕ್ಕ ಬಲಿಸಿಕೊಟ್ಟಿದೆ

ಈಗ ಧುತ್ತೆಂದು ಊರಿಗೆ ಹೊರಟುಬಿಟ್ಟರೆ; ಅಲ್ಲಿ ಬಿಸಿನೆಸ್ಸು ರತ್ನಗಂಬಳಿ ಹಾಸುವುದಿಲ್ಲ
ಇಂಟರ್‍ನೆಟ್ಟು ಉಸಿರಾಟದಷ್ಟೇ ಸಹಜವಾಗಿರುವ ಲೈಫ್ ಸ್ಟೈಲಿಗೆ, ಸಿಗ್ನಲ್ ಬಾರದ ಹಳ್ಳಿ ಸುಲಭವೆನಿಸುವುದಿಲ್ಲ
ಹಾಗಂತ ವಾಪಸ್ಸು ಹೋಗಲೇಬಾರದೆಂದೇನಿಲ್ಲ; ಹೋಗುವುದೂ ತಪ್ಪಲ್ಲ
ಆದರೆ ಬಾಲ್ಯದಲ್ಲಿ ಪೆಪ್ಪರುಮೆಂಟು ಕೊಟ್ಟವರು; ಈಗ ಚಿನ್ನದ ಬಿಸ್ಕೇಟು ಕೊಡುವರೆಂಬ ಭ್ರಮೆ ಮಾತ್ರ ಸರಿಯಲ್ಲ


ಬೆಂಗಳೂರಿಗೆ ಬೈದರೆ ಬದುಕು ಬದಲಾಗುವುದಿಲ್ಲ
ಊರು, ವರುಷಗಳ ಹಿಂದಿದ್ದಂತೇ ಈಗ ಇರುವುದಿಲ್ಲ
ಮಹಾನಗರ ಓಡುತ್ತಿರಬಹುದು; ನಾವು ನಡೆಯಬೇಕಷ್ಟೇ
ರೋಗ-ರುಜಿನ ಹರಡುತ್ತಿಹುದು; ಎಚ್ಚರಿಕೆ-ಜಾಗರೂಕತೆ ನಮ್ಮ ಕೈಲಿರುವುದಷ್ಟೇ

-ಚಿನ್ಮಯ
5/7/2020

Saturday, November 9, 2019

ಮೂವರ್ಸ್& ಪ್ಯಾಕರ್ಸ್

ಮನೆಯೆದುರು ಮೂವರ್ಸ್& ಪ್ಯಾಕರ್ಸ್ ಗಾಡಿ ಬಂದು ನಿಂತಿತ್ತು
ಅಪಾರ್ಟ್‍ಮೆಂಟಿನ ಹೊಸ ಮನೆ ಬಣ್ಣ ಬಳಿದುಕೊಂಡು ಕಾದು ಕುಳಿತಿತ್ತು
ಇಬ್ಬರೂ ಜತನದಿಂದ ಕೂಡಿಟ್ಟ ವಸ್ತುಗಳೆಲ್ಲ ಬಾಕ್ಸಿನಲ್ಲಿ ಬಂಧಿಯಾಗಿದ್ದವು
ಕೊನೆಯ ಬಾರಿ ಕದ ಹಾಕುವ ಮುನ್ನ ಇಬ್ಬರ ಕಣ್ಣುಗಳು ಒದ್ದೆಯಾಗಿದ್ದವು

ನಿಜ, ಅಪ್‍ಗ್ರೇಡ್ ಆಗಿತ್ತು ಬದುಕು 1 ಬಿ.ಹೆಚ್.ಕೆ ಇಂದ 2 ಬಿ.ಹೆಚ್.ಕೆಗೆ
ಹೆಚ್ಚಾಗುತ್ತಿತ್ತು ಸಂಬಳ ಮುಂದಿನ ಡಿಸೆಂಬರ್ ಪ್ರಮೋಷನ್‍ಗೆ
ಆದರೆ, ರಿಮೋಟಿಗಾಗಿನ ಜಗಳ, ಬಾತ್‍ರೂಮಿಗಾಗಿನ ಅವಸರ
ಬಜೆಟ್ಟಿನಲ್ಲಿಲ್ಲ ಎಂಬ ಬೇಸರ, ಬಹುಷಃ ಇಂದಿಗೆ ಕೊನೆಗಾಣುತ್ತಿತ್ತು

ಮಾಡ್ಯುಲರ್ ಕಿಚನ್, ಹೊಗೆಹೋಗುವ ಚಿಮಣಿ, ಎರಡೆರಡು ಬಾಲ್ಕನಿ
ಕದತೆರೆದರೆ ಕಾಣುವ ಲಿಫ್ಟು, ಬದಲಾವಣೆ ಬಯಸಿದ್ದೇ ಆದಂತಿತ್ತು
ರುಚಿಯಾಗದ ಮೊದಲ ಅಡುಗೆ, ಮುಗಿಯದ ಟೆರೇಸ್ ಮೇಲಣ ಮಾತು
ಕಾಯುವಿಕೆಗೆ ಸಾಥ್ ಕೊಟ್ಟ ಮನೆ ಮೆಟ್ಟಿಲುಗಳು, ಮತ್ತೆ ಇವೆಲ್ಲ ಸಿಗಲಾರದೆನಿಸುತ್ತಿತ್ತು

ಬಾರದ ನೀರು, ಕೈಕೊಟ್ಟ ಪಂಪು, ಅವರಿವರ ಕಿರಿಕಿರಿ
ಜೇಬು ಹಿರಿದಾದಂತೆ ಸಮಸ್ಯೆಗಳೂ ತೆರೆದುಕೊಂಡಿದ್ದವು
ಸೆಕ್ಯೂರಿಟಿಯ ಸಮವಸ್ತ್ರ, ಸಿ.ಸಿ.ಟಿ.ವಿಯ ಕೆಂಪುದೀಪ
ಮೆಂಟೆನೆನ್ಸ್ ಎಂಬ ಕಿಟಕಿ ತೆರೆದು ನೆಮ್ಮದಿಯ ಆಸೆ ಹುಟ್ಟಿಸಿದ್ದವು

ಹೋಗಲೇಬೇಕಲ್ಲ ಒಂದಲ್ಲ ಒಂದು ದಿನ ಬಾಡಿಗೆ ಮನೆಯ ಬಿಟ್ಟು, ಹೊರಟಿದ್ದಾಯ್ತು
ಆದರೆ ಮನೆ ಬಿಟ್ಟರೂ ಅಗ್ರೀಮೆಂಟು ಮುಗಿದಿರೂ ನೆನಪುಗಳು ಬಿಟ್ಟು ಹೋಗುವುದಿಲ್ಲ
ಹಳೆಮನೆಯ ಸಾಮಾನುಗಳ ಜೊತೆ ಹೊಸ ಕನಸುಗಳ ಬಿಚ್ಚುತ್ತಾ
ಹೊಸಮನೆಯ ಸಿಂಗರಿಸುವ ಹುಮ್ಮಸ್ಸು, ಬದುಕನ್ನು ಬೋರಾಗಿಸುವುದಿಲ್ಲ

ಮನೆಯೆದುರು ಮೂವರ್ಸ್& ಪ್ಯಾಕರ್ಸ್ ಗಾಡಿ ಬಂದು ನಿಂತಿತ್ತು
ಅಪಾರ್ಟ್‍ಮೆಂಟಿನ ಹೊಸ ಮನೆ ಬಣ್ಣ ಬಳಿದುಕೊಂಡು ಕಾದು ಕುಳಿತಿತ್ತು
ಇಬ್ಬರೂ ಜತನದಿಂದ ಕೂಡಿಟ್ಟ ವಸ್ತುಗಳೆಲ್ಲ ಬಾಕ್ಸಿನಲ್ಲಿ ಬಂಧಿಯಾಗಿದ್ದವು
ಕೊನೆಯ ಬಾರಿ ಕದ ಹಾಕುವ ಮುನ್ನ ಇಬ್ಬರ ಕಣ್ಣುಗಳು ಒದ್ದೆಯಾಗಿದ್ದವು

-ಚಿನ್ಮಯ
09/11/2019

Saturday, August 17, 2019

ಪ್ರೀತಿ

ಆನಿವರ್ಸರಿಗಳಿಗೆ ಲೆಕ್ಕವಿರಬಹುದು ಕಣೆ ಹುಡುಗಿ
ದಿನಕೊಂದು ರಂಗು ತೋರುವ ಗರಿ ಗರಿ ಪ್ರೀತಿಗಿದ್ದೀತೆ?
ಹುಣ್ಣಿಮೆಯ ಮುನಿಸು; ಅಮಾವಾಸ್ಯೆಯ ಸವಿಗನಸು
ಮಾತು ಎರಡಿದ್ದಿರಬಹುದು; ಒಂದಾಗಿ ಬದುಕಿದ್ದು ಸುಳ್ಳಾದೀತೆ?

ಕಾಲಮೇಲೆ ನಿಂತುಕೊಂಡದ್ದಾಯ್ತು; ವೀಕೆಂಡು ತಿರುಗಾಟವಾಯ್ತು
ದೂರ ಹಿಮಾಲಯದಲ್ಲಿ ಟೆಂಟು ಹೂಡಿದರೂ ಏಕಾಂತ ದಕ್ಕದಾಯ್ತು
ಕಾರ್ಪರೇಟ್ ಕಾನನದಿ ಅಲೆಯುತಾ ವಾತ್ಸಲ್ಯದ ಗುಡಿಸಿಲೊಂದ ಕಂಡೆ
ಸ್ನೇಹದ ಆಮಂತ್ರಣ, ಅಹಂ ಇಲ್ಲದ ಔತಣ; ಸಾಂಗತ್ಯದ ಅವಶ್ಯ ಮನಗಂಡೆ

ರಾತ್ರಿಯೆಲ್ಲ ಹರಟುವುದು ಏನಿರಬಹುದು? ಸ್ಲೀಪರ್ ಬಸ್ಸಿನ ಹಳೇ ಪ್ರಶ್ನೆ
ಮಾತು ಮುಖ್ಯವೇ ಅಲ್ಲ, ಮಾತಾಡುವಿಕೆಯೆ ಸುಖ; ನಡುಯೌವ್ವನದ ಪ್ರಜ್ಞೆ
ಎಲ್ಲ ಸರಿಯಾದಾಗ ಕರೆಯುವುದಕಿಂತ; ಒಟ್ಟಾಗಿ ತಪ್ಪು ಮಾಡಿವುದೆ ಅಸಲಿಯೆನಿಸಿದೆ 
ಸುಳ್ಳುಗಳ ಜೊತೆ ಸೆಲ್ಫೀಗಿಂತ; ಸತ್ಯ ಹೇಳಿ ಉಗಿಸಿಕೊಳ್ಳುವುದೇ ಸರಿಯೆನಿಸಿದೆ

ಬಕೇಟ್ ಲೀಸ್ಟು ಖಾಲಿಯಾದರೆ ಖುಷಿ; ಪ್ರಿಯಾರಿಟಿ ಲಾಸ್ಟ್ ಎಂದರೆ ಬೇಸರ
ಸಮಪಾಲು ಕಾರ್ಯರೂಪವಾಗದಿರೆ ಅಸಮತೆಗೆ ಸಮ್ಮತಿ; ಎಂದಿಗೂ ಸಮ್ಮಿಶ್ರ ಸರಕಾರ
ಅದೇಕೋ ತಮಾಷೆ ಮಾಡಿ ನಗಿಸುವುದಕಿಂತ, ನಿರಾಸೆಯ ಕೇಳಿಸಿಕೊಳ್ಳುವುದು ಇಷ್ಟವಾಗಿದೆ
ಎಲ್ಲರೆದುರು ಎದ್ದು ಕಾಣುವುದಕಿಂತ, ಎಲ್ಲರೊಳಗೊಂದಾವುದು ಆಪ್ತವಾಗುತ್ತಿದೆ

ಆನಿವರ್ಸರಿಗಳಿಗೆ ಲೆಕ್ಕವಿರಬಹುದು ಕಣೆ ಹುಡುಗಿ
ದಿನಕೊಂದು ರಂಗು ತೋರುವ ಗರಿ ಗರಿ ಪ್ರೀತಿಗಿದ್ದೀತೆ?
ಹುಣ್ಣಿಮೆಯ ಮುನಿಸು; ಅಮಾವಾಸ್ಯೆಯ ಸವಿಗನಸು
ಮಾತು ಎರಡಿದ್ದಿರಬಹುದು; ಒಂದಾಗಿ ಬದುಕಿದ್ದು ಸುಳ್ಳಾದೀತೆ?

-ಚಿನ್ಮಯ
17/08/2019

Monday, May 27, 2019

ಮಳೆಗಾಲದ ಒಂದು ದಿನ

ಮಳೆಗಾಲದ ಒಂದು ದಿನ; ವಿಶೇಷವೇನಿರಲಿಲ್ಲ
ಹಂಚಿನ ಮಾಡು ಸೋರುತ್ತಿತ್ತು; ಹೊಳೆ ತುಂಬಿ ಹರಿಯುತ್ತಿತ್ತು
"ಇಟ್ಸ್ ರೇನಿಂಗ್ ಔಟ್‍ಸೈಡ್"; ಎಲ್ಲ ಅಸ್ತವ್ಯಸ್ತ
ಕ್ಯಾಬು ಬುಕ್ ಆಗಲಿಲ್ಲ; ಫುಡ್ಡು ಡಿಲಿವರ್ ಆಗಲಿಲ್ಲ

ಮಾನ್ಸೂನು ಕೇರಳ ಮುಟ್ಟಿತಂತೆ; ಇನ್ನು ನಾಲ್ಕಾರೇ ದಿನ
ಹಪ್ಪಳ ಸಂಡಿಗೆ ಒಳಗಿಡಬೇಕು,ಕಂಬಳಿ ಕೊಪ್ಪೆ ತೆಗೆದಿಡಬೇಕು
ಬಾಕಿ ಉಳಿದಿದೆ ಕೊಡೆಯ ರಿಪೇರಿ
ನೂಕೂವರೆ ತಿಂಗಳ ಮಳೆಗೆ ತಯಾರಿ

ಥಂಡ್ ಸ್ಟೋರ್ಮು ಆಂಡ್ ರೇನಿಂಗು, ನೈಂಟಿ ಪರಸೆಂಟ್ ಛಾನ್ಸು
ಬೈಕ್ ಬಿಟ್ಟು ಕಾರಲ್ಲೇ ಓಡಾಡಬೇಕು; ಅಂಡರ್‍ಪಾಸು ಅವಾಯ್ಡ್ ಮಾಡಬೇಕು
ಮೀಟಿಂಗ್ ಇಟ್ಟ ಫಾರೆನ್ ಬಾಸು; ಆಫೀಸಿನಲ್ಲಿ ಅಧಿಕೃತ ಟೈಂ ಪಾಸು
ಒಂಭತ್ತೂವರೆಗೆ ಮುಗಿಯುವ ಆಗುವ ಸಂಭವ; ಲೇಟಾದ್ರೂ ಮ್ಯಾಚ್ ನಡೆಯೋ ಆಶಾಭಾವ

ಹೊಳೆನೀರ ಹರಿವಿನ ಮೇಲೆ ಬಿದ್ದ ಮಳೆಯ ಲೆಕ್ಕಾಚಾರ
ಪವನ ಪೌರುಷಕ್ಕೆ ತಲೆ ಬಾರಿ ಅಡಿಕೆ ಮರ ಬಿದ್ದ ಸಮಾಚಾರ
ಹರಿವ ನೀರಿನ ಎದುರು ಕಾಲಿಟ್ಟು ಪುಟ್ಟದೊಂದು ಕಟ್ಟೆ ಕಟ್ಟಬೇಕು
ತಿಳಿನೀರು ಕಟ್ಟೆ ದಾಟಿ ಕಾಲ ಸೋಂಕಿದಾಗ ಸರ್ವಾಂಗ ಪುಳಕವಾಗಬೇಕು

ಕರೆಂಟ್ ಹೋದರೆ ಇನ್ವರ್ಟರ್ ಉಂಟು; ಇಂಟರ್‍ನೆಟ್ಟಿಗೆ ಪರ್ಯಾಯವಿಲ್ಲ
ವರ್ಕಫ್ರಾಂ ಹೋಮ್ ಎಂಬ ಸಾಫ್ಟ್‍ವೇರ್ ಸುಖ ಅಂದಿಗೆ ದಕ್ಕುವುದಿಲ್ಲ
ಮನೆ ಮುಂದೆ ಬೇರೆ ಕಸ ಕಟ್ಟಿ ಡ್ರೈನೇಜು ಬ್ಲಾಕು; ರಸ್ತೆಯ ಮೇಲಿದ್ದ ನೀರೆಲ್ಲ ಕಪ್ಪು ತಪ್ಪು
ಕಟ್ಟಿದವರೋ ಅಗೆದವರೋ ಎಸೆದವರೋ, ಸೂಟು ಹಾಕಿದಾಗ ಕಾಣುವುದಿಲ್ಲ ಯಾರದೂ ತಪ್ಪು

ಬೀಜ ಮೊಳೆತು ಕುಡಿಯೊಡೆವ ಸಂಭ್ರಮ; ತೊಂದರೆಗಳ ಗಡಿ ಮೀರಿದ ಸಹನೆ
ಅಪರೂಪಕ್ಕೆ ಬಂದ ಎಳೆ ಬಿಸಿಲ ಬೆಂಕಿಪೆಟ್ಟಿಗೆಯಲ್ಲಿ ತುಂಬಿಡುವ ಕಲ್ಪನೆ
ಇತ್ತ ಗಿಜಿಗುಡುವ ಬಜಾರಕ್ಕೆ ಮಳೆಯ ಸಿಂಚನ; ಬಾಯ್ತೆರೆದ ಇಳೆಗೆ ಕೊಂಚ ಸಾಂತ್ವನ
ಸೂಟುಧಾರಿಗಳ ಶಾಪ, ಟ್ರಾಫಿಕ್ಕೆಂಬ ಶಕ್ತಿಕೂಪ, ಸರ್‍ಚಾರ್ಚುಗಳ ಅಟಾಟೋಪ

ಮನುಷ್ಯ ಒಬ್ಬನೇ, ಭೂಮಿಯೊಂದೇ
ಷಹರಕ್ಕೂ ಹಳ್ಳಿಗೂ ಅದೆಷ್ಟು ನೋಟಿನ ಅಂತರ
ಅದೆಂಥಾ ನೋಟದ ಅಂತರ

ಮಳೆಗಾಲದ ಒಂದು ದಿನ; ವಿಶೇಷವೇನಿರಲಿಲ್ಲ
ಹಂಚಿನ ಮಾಡು ಸೋರುತ್ತಿತ್ತು; ಹೊಳೆ ತುಂಬಿ ಹರಿಯುತ್ತಿತ್ತು
"ಇಟ್ಸ್ ರೇನಿಂಗ್ ಔಟ್‍ಸೈಡ್"; ಎಲ್ಲ ಅಸ್ತವ್ಯಸ್ತ
ಕ್ಯಾಬು ಬುಕ್ ಆಗಲಿಲ್ಲ; ಫುಡ್ಡು ಡಿಲಿವರ್ ಆಗಲಿಲ್ಲ
-ಚಿನ್ಮಯ
27/5/2019